Friday, March 16, 2018

ಮರೆತ ಕನಸು


ಕೊಂಚವೂ ನೆನಪಿಲ್ಲ
ಹೊಂಗನಸೇ ಇರಬಹುದು
ಎದ್ದಾಗ ಮುಖ ಅರಳಿತ್ತು
ಏನಿರಬಹುದು ಆ ಮರೆತ ಕನಸು
ಜ್ಞಾಪಕ ಇರಬೇಕಿತ್ತು.

ಅಲೆಲ್ಲೋ ಹುದುಗಿದೆ ಮಸ್ತಕದೊಳಗೆ
ಯಾವುದೋ ಬಣ್ಣದ
ಯಾವುದೋ ಹೂಗಳ
ರಾಶಿ ತುಂಬಿದ
ಆಗಷ್ಟೇ ಕರಗಿದ ಮಂಜಿನ ಹನಿಗಳ
ಬೆಟ್ಟದ ಕಣಿವೆ
ನಾ ಕಂಡಿದ್ದು ಇದೇನಾ?

ಅಥವಾ ಮನೆಮಂದಿಯೊಂದಿಗೆ
ಮಗುವಾಗಿ ಆಟವಾಡಿದ ಕನಸಾ?

ಇಲ್ಲ  ಇದೇ ಇರಬಹುದು
ಬದುಕಿನ ದಾರಿಯಲ್ಲಿ
ಈವರೆಗೂ ಕಾದು
ಸಿಕ್ಕ ಆ ಕೈಗಳ ಹಿಡಿದು
ನಡೆದ ನೆನಪು
  
ನನ್ನ ಪಕ್ಕದಲ್ಲೇ ಇದ್ದಳು
ತುಸು ನಕ್ಕು, ಹುಸಿ ಕೋಪ
ಸ್ವಲ್ಪ ತುಂಟಾಟ
ಯಾರೂ ಬರದ ಸಣ್ಣ ಓಣಿಯಲ್ಲಿ
ಮುಸು ಮುಸು ಮುಂಜಾನೆ
ಬಂಗಾರದ ಎಲೆಗಳನ್ನು ಮೆಟ್ಟುತ್ತ
ಹೋದಂತ ಅನುಭವ

ಮಂಜಿನ ಹನಿಗಳು
ಅವಳ ಮೊಗವ ಸ್ಪರ್ಶಿಸಲು
ವಜ್ರದಂತೆ ಹೊಳೆಯುವ ಆ ಕಂಗಳ ನೋಡುತ್ತಾ
ಹೋಗುತ್ತಾ ಇರುವ
ಕನಸೇ
ನಾ ಮರೆತ ಕನಸಾಗಿರಲಿ


( Adapted from http://soimheresujith.blogspot.in/2018/03/the-forgotten-dream_14.html )

0 Comments:

Post a Comment