ಪ್ರತಿ ಶನಿವಾರ ವಾಯುವಿಹಾರಕ್ಕೆ ನಾನಿಲ್ಲಿ ಬರುವುದು ವಾಡಿಕೆ. ಬೆಂಗಳೂರಿನಲ್ಲಿ ಅಳಿದುಳಿದ ಕೆರೆಗಳನ್ನು ಕಾಪಾಡಿಕೊಂಡು, ಅದರ ಸುತ್ತ ಓಡಾಡಲು ಜಾಗ ಮಾಡಿ, ಒಂದಷ್ಟು ಆಸನ ಹಾಕಿ, ಅಷ್ಟೂ ಜಾಗಕ್ಕೊಂದು ಬೇಲಿ ಹಾಕಿರೋದು ಶ್ಲಾಘನೀಯವೇ. ನೀರನ್ನು V ಆಕಾರದಲ್ಲಿ ಸೀಳಿ ಹೋಗುವ ಹಂಸದಿಂದ ಹಿಡಿದು, ಇದ್ದಕ್ಕಿಂದ್ದಂತೆ ನೀರಿನಲ್ಲಿ ಮುಳುಗಿ ಮಾಯವಾಗಿ ಇನ್ನೆಲ್ಲೋ ಪ್ರತ್ಯಕ್ಷವಾಗೋ ಆ cormorant ಯಾವುದೇ ತೊಂದರೆ ಇಲ್ಲದೆ ಓಡಾಡುವುದು ನೋಡುವುದೇ ಮುದ. ಕೆರೆಯ ಮಧ್ಯ ಒಂದು ಪುಟ್ಟ ದ್ವೀಪ ಇದ್ದರೆ ಇನ್ನೂ ಚೆಂದ. ಅದು ಇಲ್ಲಿದೆ. ಕಪ್ಪು, ಬಿಳುಪು ಹಕ್ಕಿಗಳ ರಾಶಿ ನೋಡಬಹುದು. ಯಾವ ಹಕ್ಕಿ ಅಂದಾಗ pelican ಅಂದ್ರೆ Falcon ಅಂತೆ ಅಂತ ಹೇಳಿ ಬೆರಗುಗಣ್ಣಿಂದ ನೋಡುವವರನ್ನ ಯಾವತ್ತೂ ಸರಿಮಾಡಬೇಕು ಎಂದನಿಸಲಿಲ್ಲ.
ಮೂರೂವರೆ ಕಿಲೋಮೀಟರ್ ಸುತ್ತಳತೆಯ ಈ ಕೆರೆಗೆ ಒಂದು ಸುತ್ತು ಹಾಕುವ ಹೊತ್ತಿಗೆ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಅಲ್ಲಲ್ಲಿ ಓಡಾಡೋ ಪುಟ್ಟ ಮಕ್ಕಳು , ಅವರ ಹಿಂದೆ ಮಕ್ಕಳು ಬಿದ್ದರೆ ಅಂತ ಭಯಬಿದ್ದು "Dont run so fast, you will fall" ಅಂತ ಆಂಗ್ಲದಲ್ಲೇ ಕೂಗುತ್ತ ಓಡುವ ತಂದೆ ತಾಯಂದಿರು, ಸ್ವಂತಿ (Selfie) ಪ್ರಿಯರು , instagram reel ಅಲ್ಲಿ ರೈಲು ಬಿಡಲು ಹಂಬಲಿಸುವ ಮಾಜಿ tiktok ತಾರೆಗಳು , ಒಬ್ಬ DSLRಧಾರಿಯ ಹಿಂದೆ ಬೆಳಕಿಗೆ ಮುತ್ತಿಕೊಳ್ಳುವ ಪತಂಗದಂತೆ ಮುತ್ತಿಕೊಂಡಿರುವ ಆತನ ದೋಸ್ತ್ ಗಳು, ತಮ್ಮ ವಿವಾಹಪೂರ್ವ ರೋಮಾಂಚಕ ಕ್ಷಣಗಳನ್ನು ಬಂಧಿಸಲು ಪ್ರಯತ್ನಪಡುತ್ತಿರುವ ಯುವ ಪ್ರೇಮಿಗಳು/ ನಿಸ್ಚಿತಾರ್ಥಪ್ರಾಪ್ತರು , ಅವರೊಂದಿಗಿರೋ ಇತ್ತೀಚಿಗಷ್ಟೇ ನಾಯಿಕೊಡೆಗಳಂತೆ ಎಲ್ಲಂದರಲ್ಲಿ ಹುಟ್ಟಿಕೊಂಡಿರೋ pre-wedding photographerಗಳು , ಕೆರೆಯ gate ಆಚೆನೇ ಸಿಗೋ ಪಾನಿಪುರಿಯ ಬಗ್ಗೆಯೇ ಯೋಚಿಸುತ್ತ fitbitನ ಉಟ್ಟುಬಿಟ್ಟು ಉಫ್ಫ್ ಉಫ್ಫ್ ಅಂತ ಎದುಸಿರು ಬಿಡುತ್ತ ಓಡೋ fitnessfreakಗಳು , ಅಜ್ಜಿ ತಾತಂದಿರು , armyಯಲ್ಲಿದ್ದೆ ಅನ್ನೋ ದೌಲತ್ತಿನಲ್ಲಿ stick ಹಿಡಿದುಕೊಂಡು strictಆದ ಮುಖಭಾವ ಹೊತ್ತು ಓಡಾಡೋ ಮಾಜಿ ಮಿಲಿಟರಿ ಸಿಪಾಯಿ , ಹತಾಶೆಗೊಂಡು ದಿಕ್ಕಿಲ್ಲದೆ ಸೀಟ್ ಒಂದನ್ನು ಆಕ್ರಮಿಸಿಕೊಂಡು ಮುಚ್ಚುವ ವೇಳೆಯ ತನಕ ಕಾಲ ಕಳೆಯೋ ಮಹಾಶಯರು , ತಾನು ನಡೆಯುವಾಗ ತನಗೂ ಕೇಳಿಸುವ ಹಾಗೆ ಅಕ್ಕ ಪಕ್ಕ ಹತ್ತು ಅಡಿಯಲ್ಲಿರುವವರಿಗೂ ಕೇಳುವ ಹಾಗೆ ಮೊಬೈಲ್ ಅಲ್ಲಿ ದೊಡ್ಡದಾಗಿ ಹಳೇ ಕನ್ನಡ ಹಾಡನ್ನೋ ದೇವರನಾಮವನ್ನೋ ಹಾಕಿ ನಡೆಯುವ ಸಮಾಜ ಸೇವಕರು, ಊರೇ ಖಾಲಿಯಾಗಿ ಸರ್ವನಾಶವಾದರೂ ಮೊಬೈಲ್ ಸ್ಕ್ರೀನ್ ದುನಿಯಾ ಬಿಟ್ಟು ಆಚೆ ಬರದವರು ಹೀಗೆ ಇನ್ನು ಹಲವಾರು ದೇಶ, ವೇಷ ಭಾಷೆಗಳ ಜನ ನೋಡಲು ಸಿಗುತ್ತಾರೆ.
ಈ ಕೆರೆಗೆ ಬರಲು ಎರಡು ದ್ವಾರಗಳು. ಮುಖ್ಯದ್ವಾರದಿಂದ ಪ್ರದಕ್ಷಿಣಾಕಾರವಾಗಿ ಹೊರಟರೆ ಕೇವಲ ಕಾಲುಗಂಟೆಗೆ ಇನ್ನೊಂದು ದ್ವಾರ ಸಿಗುತ್ತೆ. ಕೆರೆ ಪೂರ್ತಿ ಸುತ್ತಲಾಗದವರು ಕೇವಲ ಈ ಎರಡು ದ್ವಾರದ ಅಕ್ಕ ಪಕ್ಕ ಸುತ್ತುತ್ತಾರೆ. ಸುಸ್ತಾದರೆ ಸಮಯವಾದರೆ ಅಲ್ಲಿಂದ ಹೋಗಲು ಸಲೀಸಾಗಲೆಂದು. ಪ್ರತಿ ವಾರ ಹೋಗುವ ನನಗೆ ವಾರವೂ ಸಿಗುವ ಕೆಲವು ಪರಿಚಿತ ಮೊಗಗಳು ಕೊಡುವ ಆ ಸಣ್ಣ ಮುಗುಳುನಗೆ ಆಪ್ತತೆ ತೋರಿದರೆ ಹೊಸಮುಖಗಳು ಹೊಸ ಕಥೆಗಳಂತೆ ಸೆಳೆಯುತ್ತೆ.
ಆ ಹೊಸಮುಖಗಳಲ್ಲಿ ಒಬ್ಬನೇ ಈ ಅಜ್ಜ. ಹೆಸರು, ವಿಳಾಸ, ಕುಲ, ಗೋತ್ರ ಇವು ಯಾವುದೂ ಬೇಕಿಲ್ಲ. ಇಷ್ಟು ಜನರ ಮಧ್ಯ ಕಂಡರೂ ಕಾಣದಂತೆ ಸಾಗುವ ಒಬ್ಬ ಅತೀಸಾಮಾನ್ಯ ಮುದುಕ ಅವತ್ತು ಯಾಕೋ ನನಗೆ ಕಾಣಿಸಿಕೊಂಡು ಬಿಟ್ಟಿದ್ದ. ಬಹುಶಃ ಆತ ಕೈಲಿ ಅತಿಭಾರ ಅನಿಸೋ ಚೀಲ ಒಂದನ್ನು ಹೊತ್ತು ಹೋಗದಿದ್ದರೆ ಆ ತಾತ ಕಾಣಿಸುತ್ತ ಇರಲಿಲ್ಲವೇನೋ. ನೆಲ ನೋಡುತ್ತಾ ಚೀಲ ಎತ್ತಿಕೊಂಡು ಮುಖ್ಯದ್ವಾರದಿಂದ ಒಳಗೆ ಬರುವುದಕ್ಕೂ ನಾನೊಂದು ಸುತ್ತು ಮುಗಿಸಿ ಅಲ್ಲಿ ತಲುಪುವುದಕ್ಕೂ ಸರಿಯಾಗಿತ್ತು. ಹೀಗೆ ಬಂದಿರಬೇಕಾದರೆ ವಾಯುವಿಹಾರಕ್ಕೇನು ಅಲ್ಲ , ಆ ಇನ್ನೊಂದು ದ್ವಾರದಿಂದ ಆಚೆ ಹೋಗಲು ಎಂದು ತಿಳಿಯುವುದಕ್ಕೆ ಯಾವ ಪತ್ತೇದಾರಿ ತಂತ್ರದ ಸಹಾಯವೂ ನನಗೆ ಬೇಕಿರಲಿಲ್ಲ. ಹೊಸಬರೊಂದಿಗೆ ಅಷ್ಟು ಸಲೀಸಾಗಿ ಮಾತನಾಡದ ನನಗೆ ಆ ತಾತನನ್ನು ಕಂಡು ಆಯ್ಯೋ ಅನಿಸಿತು. ಸೀದಾ ಹೋದವನೇ ಅದನ್ನು ಇಲ್ಲಿ ಕೊಡಿ, ನಾನೇ ಎತ್ತಿಕೊಂಡು ನಿಮ್ಮ ಜೊತೆ ಬರುವೆ . ಅಲ್ಲಿಂದ ಮುಂದೆ ಹೇಗಿದ್ದರೂ ನೀವೇ ತೆಗೆದುಕೊಂಡು ಹೋಗಬೇಕಲ್ವ ಅಂತ ಹೇಳಿ ಬೇಡವೆಂದರೂ ಕೈಯಿಂದ ಕಸಿದುಕೊಂಡು ಅವರ ಜೊತೆ ಹೊರಟೆ. ಚೀಲವಂತೂ ಯಮಭಾರವಿತ್ತು. ಏನಿದೆ ಎಂದು ಇಣುಕಿ ನೋಡುವುದು ಸೌಜನ್ಯವಲ್ಲ ಅನಿಸಿತು. ಸುಮ್ಮನೆ ಹೊರಟೆ . ಅವರೂ ಕಡಿಮೆ ಮಾತುಗಾರರನಿಸುತ್ತೆ . ಹಾಗಾಗಿ ಒಂದಷ್ಟು ದೂರ ಸದ್ದಿಲ್ಲದೇ ನಡೆದಿದ್ದಾಯ್ತು. ನಾನೇ ಮೌನ ಮುರಿದು ಯಾವುದಾದರೂ ವಿಷಯ ಎತ್ತಿದರೂ ಒಂದೆರಡು ಪದಗಳನ್ನಾಡಿ ಸುಮ್ಮನಾಗುತಿದ್ದರು. ಮೌನ ಮುಂದುವರೆಯುತು. ಅತಿವಿನಯನಾಗಿ ನಾನು ಮೊಬೈಲ್ ಹಾಡು ಕೇಳುವುದೂ ನಿಲ್ಲಿಸಿದ್ದೆ. ಮೌನಿಗೆ ಸಾಥ್ ಕೊಡಲು
ಇಷ್ಟೇ ಚಿಕ್ಕ ದೂರಕ್ಕಾದರೂ ಒಬ್ಬರ ಭಾರ ಕಡಿಮೆಗೊಳಿಸಿದ ಹೆಮ್ಮೆಯೂ ನನ್ನ ಎದೆಯುಬ್ಬಿಸಿ ನಡೆಯುವಂತೆ ಮಾಡಿತ್ತು. ನಿಧಾನ ನಡಿಗೆಯ ಇಪ್ಪತ್ತೈದು ನಿಮಿಷದ ನಂತರ ಆ gate ಬಂದಿತು. ತಾತ ಸಣ್ಣ ಮುಗುಳುನಗೆ ಬೀರಿ , ಧನ್ಯವಾದ ಹೇಳುತ್ತಾ ನನ್ನ ಕೈ ಇಂದ ಚೀಲ ತೆಗೆದುಕೊಂಡು ಹೊರಡುವಾಗ, "ಇನ್ನೂ ದೂರ ಹೋಗಬೇಕ ತಾತಾ ?" ಎಂದು ಕೇಳಿದಾಗ ದೊಡ್ದಗಾಗಿ ನಕ್ಕು ಕೈಸನ್ನೆಯಲ್ಲೇ ಇಲ್ಲ ಅಂದರು. ನಾನೂ ಮಹತ್ಸಾಧನೆ ಮಾಡಿದ್ದು ಆಗಿತ್ತು. ವಿದಾಯ ಹೇಳಿ ಹೊರಟೆ.
ಎರಡು ಮೂರು ಹೆಜ್ಜೆ ಹಾಕುತ್ತ ಹಾಗೆ ತಾತನು ಯಾವ ಕಡೆ ಹೊರಟ ಅಂತ ವಿನಾಕಾರಣ ತಿಳಿದುಕೊಳ್ಳಲು ತಿರುಗಿ ನೋಡಿದರೆ ತಾತಪ್ಪ ಅಲ್ಲೇ ರಸ್ತೆಯ ಹತ್ತಿರ ನಿಂತು ಚೀಲ ಉಲ್ಟಾ ಮಾಡಿ ಖಾಲಿ ಮಾಡಲು ಪ್ರಯತ್ನಿಸುತಿದ್ದ. ಅರೇ ಇದೇನಿದು ಅಂತ ವಾಪಸ್ಸು ಹೊರಟೆ ಸಮೀಪದಿಂದ ನೋಡಲು. ಧೊಪ್ ಅಂತ ಚೀಲದಿಂದ ಬಿದಿದ್ದು ಒಂದು ದೊಡ್ಡ ಕಲ್ಲು !!
ಎಲಾ ಇವನಾ , ಈ ಕಲ್ಲನ್ನಾ ಇಷ್ಟು ಹೊತ್ತು ಈ ತಾತ ಸಾಗಿಸಿದ್ದು.. ನಾನೂ ಸಹಾಯ ಮಾಡಿದ್ದು ? ಯಾಕೆ ಹೊತ್ತಿರಬಹುದು . ಇಲ್ಲಿ ಯಾಕೆ ಎಸೆದಿರಬಹುದು. ಒಂದು ತಲೆ, ನೂರೆಂಟು ಪ್ರಶ್ನೆಗಳು.
"ತಾತ. ಏನಿದು ಕಲ್ಲು ? ಎಲ್ಲಿಂದ ತಂದಿದ್ದು ? ಯಾಕಿಲ್ಲಿ ಹಾಕಿದ್ದು ? "
"ಕೈಯಲ್ಲಿ ಚೀಲ ಖಾಲಿ ಇತ್ತು .ಅಲ್ಲೇ ರಸ್ತೆಯಲ್ಲಿ ಕಲ್ಲು ಸಿಕ್ತು. ತಂದೆ. ಈಗ ಎಸೆಯಬೇಕು ಅನಿಸಿತು ಎಸೆದೆ " ಅನ್ನುತ್ತ ಹೊರಟು ಹೋದ
ಕ್ಷಣಕಾಲ ನನಗೆ ಏನನ್ನಬೇಕು ಅನ್ನೋದೇ ಗೊತ್ತಾಗಲಿಲ್ಲ . ಆ ಬಿದ್ದ ಕಲ್ಲಿನ ಹಾಗೆ ನಿಂತೆ.
ಕೆಲವರು ಹರ್ಷವಿಲ್ಲದೆ ಖಾಲಿ ಇರೋ ಮನಸನ್ನು ವಿನಾಕಾರಣ ಚಿಂತೆಯೋ, ದುಖವೋ , ಇನ್ಯಾವುದೋ ಭಾರ ಹೊತ್ತು ತಿರುಗುತ್ತಾರೆ.
ಅವರ ನೋಡಿ ಕನಿಕರವಿತ್ತು ಇನ್ನೂ ಕೆಲವರು ಅವರ ಭಾರ ಹೊರಲು ಸಹಾಯವೂ ಮಾಡುತ್ತಾರೆ .
ಕೊನೆಯಲ್ಲಿ ಇಬ್ಬರಿಗೂ ಏನೋ ಸಾಧಿಸಿದ ಭಾವ.
ಇವೆಲ್ಲ ನಡೆದೇ ಇಲ್ಲವೇನೋ ಎಂಬಂತೆ ಕೆರೆಗೆ ಇನ್ನೊಂದು ಸುತ್ತು ಹಾಕಿದೆ. ದ್ವೀಪ deep thinking ಅಲ್ಲಿ ಮುಳುಗಿತ್ತು
0 Comments:
Post a Comment