Saturday, August 29, 2009

ಯುದ್ಧ - A Violent Love Story

ಆಕೆ ಅಪರಾಧಿ. ಆಕೆ ಈತನ ಹೃದಯ ಕದ್ದಿದ್ದಳು . ಆಕೆ ಕಳ್ಳಿ . ಈತ ಕೋಪಗೊಂಡ. ಹುಸಿಗೋಪಗೊಂಡ. ಆಕೆ ಮತೊಮ್ಮೆ ಸಿಕ್ಕಾಗ ಕಣ್ಣು ಹೊಡೆದ .ಆಕೆಗೆ ಆಘಾತವಾಯಿತು. ಕೂಡಲೇ ಚಪ್ಪಲಿಯಿಂದ ತಿರುಗೇಟು ನೀಡಿದಳು .

ಈತ ಸುಮ್ಮನಿರಲಿಲ್ಲ .ಸರಿಯಾದ ಸಮಯಕ್ಕೆ ಕಾದ.ಸಂದರ್ಭ ಬಂದೊಡನೆ ಪ್ರೀತಿಯ ಹೂಬಾಣದಿಂದ ದಾಳಿ ಮಾಡಿದ .ಗಾಯಗೊಂಡರೂ ಅವಳು ಅದೇ ಪ್ರೀತಿಯಿಂದ ಮಾಡಿದ ಬಲೆ ಬೀಸಿದಳು .ಆತ ಸೆರೆಯಾದ .ಕಪ್ಪ ಕಾಣಿಕೆಯಂತೆ ಆತ ಆಕೆಗೆ ಮುಳ್ಳಿಂದ ಕೂಡಿದ ಗುಲಾಬಿ ಹೂವು ನೀಡಿದ . ತಿಳಿಯದೆ ಅದನ್ನು ತೆಗೆದುಕೊಂಡ ಆಕೆಯ ಬೆರಳಿನಿಂದ ರಕ್ತ ಚಿಮ್ಮಿತು .ರಕ್ತ ದಾಹಿಯಾದ ಅವನು ಕೂಡಲೇ ಆಕೆಯ ರಕ್ತ ಹೀರಿದ .ಆಕೆಯ ಕೆನ್ನೆ ಕೆಂಡಮಂಡಲವಾಯಿತು .(ನಾಚಿಕೆಯಿಂದ ಕೆಂಪಾಯಿತು )

ಸಂಧಾನಕ್ಕೆ ಹಿರಿಯರು ಬಂದರು ಇಬ್ಬರನ್ನು ರಣರಂಗಕ್ಕೆ ತಂದರು .ಒಂದೇ ಕಡೆ ಕೂಡಿಸಿದರು .ಇಬ್ಬರ ನಡುವೆ ಬೆಂಕಿ ಉರಿಯುತಿತ್ತು .ಮಣಮಣನೆ ಮಂತ್ರ ಗೊಣಗುತಿದ್ದ ಮಧ್ಯದಲ್ಲಿರುವ ಸಂಧಾನಕಾರನು ಅವರಿಬ್ಬರ ನಡುವೆ ಉರಿಯುತಿದ್ಧ ಬೆಂಕಿಗೆ ತುಪ್ಪ ಸುರಿಯುತಿದ್ಧ .ಅಗ್ನಿಯು ಚೌಕಟ್ಟಿನೆಲ್ಲೆಡೆ ಆವರಿಸಿತ್ತು .ಎಲ್ಲೆಲ್ಲು ಕುಂಕುಮ ತುಂಬಿ ಭೂಮಿ ಕೆಂಪಾಗಿತ್ತು .ಆತನ ಕಡೆಯವರು ಆಕೆಯ ಪಕ್ಕದಲ್ಲಿ ಬತ್ತಿಯಿಟ್ಟರು (ಅಗರಬತ್ತಿ ). ಅದರಿಂದ ಬಂದ ಹೊಗೆ ಇಡೀ ರಣರಂಗವನ್ನೇ ಆವರಿಸಿತ್ತು.

ಸಂಧಾನಕಾರರು ಅವರಿಬ್ಬರ ಕೈ ಕೈ ಮಿಲಾಯಿಸಿದರು. ಅವರಿಬ್ಬರೂ ಯುದ್ಧ ಶುರು ಮಾಡಿದರು. ಅಗ್ನಿಯ ಸುತ್ತ ಎಚ್ಚರಿಕೆಯಿಂದ ತಿರುಗಿದರು. ವೀರ ಹೋರಾಟ ನೋಡಲು ನೂರಾರು ಜನ ಸೇರಿದ್ದರು .ವೀರ ಕಹಳೆ ಮೊಳಗಿತು. ಗಂಟೆ ನಗಾರಿಯ ಶಬ್ದ ಎಲ್ಲೆಡೆ ಕೇಳಿ ಬರುತಿತ್ತು .ಆತ ಕೂಡಲೇ ಆಕೆಯ ಕುತ್ತಿಗೆಗೆ ತಾಳಿ ಬಿಗಿದ. ಆದರೆ ಆಕೆ ಸೋಲೊಪ್ಪಲಿಲ್ಲ. ಮರುದಿನವೇ ಆತನ ಜುಟ್ಟು ತನ್ನ ಕೈಯಲ್ಲಿರುವಂತೆ ನೋಡಿಕೊಂಡಳು .

ವರ್ಷಗಳೇ ಉರುಳಿತು .ಯುದ್ಧ ಮುಂದುವರಿಯುತಿತ್ತು. ಆಕೆಗೆ ಕಟ್ಟಿದ ತಾಳಿ ಸಿಡಿಲಗೊಳ್ಳಲಿಲ್ಲ .ಆಕೆ ಆತನ ಜುಟ್ಟು ಬಿಟ್ಟು ಕೊಟಿಲ್ಲ. ಯುದ್ಧ ಮುಂದುವರಿಯುತಿತ್ತು .ಆಕೆ ಲಟ್ಟಣಿಗೆಯಿಂದ ಪ್ರಹಾರ ಮಾಡಿದರೆ ಆತ ಶಿರಸ್ತ್ರಾಣ ಧರಿಸುತಿದ್ಧ .ಆತ ಕುಡಿದು ಬಂದು ತೊಂದರೆ ಮಾಡಿದರೆ ಆಕೆಗೆ ತವರು ಮನೆ ಆಸರೆಯಗುತಿತ್ತು .ಯುದ್ಧ ಮುಂದುವರಿಯುತಿತ್ತು .ಮುಂದುವರೆಯುತಿರುತ್ತದೆ ....ಇಬ್ಬರ ವೀರಮರಣದ ತನಕ.

"ಸಮರ" ಸವೇ ಜೀವನ .
"ವೀರ"ಸವೇ ಮರಣ .